ಅಂಕುಶ ಕಪಾಲಿ

 ಮುಳ್ಳು ತಲೆಯ ಈ ಪ್ರಾಣಿಗಳು (ಆಂಕ್ಯಾತೋಕಿಫಾಲ) ಪರತಂತ್ರ ಜೀವಿಗಳು, ಪ್ರೌಢಾವಸ್ಥೆಯಲ್ಲಿ ಮೀನು, ಹಕ್ಕಿ ಮತ್ತು ಸ್ತನಿಗಳ ಕರುಳಿನಲ್ಲಿಯೂ ಡಿಂಭಾವಸ್ಥೆಯಲ್ಲಿ (ಲಾರ್ವಾ) ಸಂಧಿಪದಿಗಳ ದೇಹದಲ್ಲಿಯೂ ವಾಸಿಸುತ್ತವೆ. ಇವುಗಳ ದೇಹದ ಮುಂಭಾಗದಲ್ಲಿ ಒಂದು ಗುಂಡಾದ ಸೊಂಡಿಲು ಇರುತ್ತದೆ. ಅದರ ಮೇಲೆ ಹಿಮ್ಮುಖವಾಗಿ ಬಾಗಿದ ಮುಳ್ಳುಗಳಿರುತ್ತವೆ. ಆದ್ದರಿಂದಲೇ ಈ ವಂಶದ ಪ್ರಾಣಿಗಳಿಗೆ ಮುಳ್ಳುತಲೆಯ ಪ್ರಾಣಿಗಳೆಂದು ಹೆಸರು. ಆಶ್ರಯ ಜೀವಿಯಿಂದ ಹೊರಕ್ಕೆ ತೆಗೆದಾಗ ಇವು ದುಂಡಗೆ ಸೆಟೆದುಕೊಳ್ಳುತ್ತವೆ.

 ಅಂಕುಶ ಕಪಾಲಿಗಳ ದೇಹವನ್ನು, ಚೂಪಾದ ಮುಳ್ಳುಗಳಿಂದ ಕೂಡಿದ ಸೊಂಡಿಲು, ಕತ್ತು ಮತ್ತು ಮುಂಡ ಎಂದು ಮೂರು ಭಾಗವಾಗಿ ವಿಂಗಡಿಸಬಹುದು. ಸೊಂಡಿಲಿನ ಮೇಲೆ ಕ್ರಮವಾಗಿ, ಹಿಂದಕ್ಕೆ ಬಾಗಿದ ಮುಳ್ಳುಗಳು ಹರಡಿವೆ. ಸೊಂಡಿಲು ಒಂದು ಕೋಶದೊಳಗಿದೆ. ಈ ಪ್ರಾಣಿಯು ಸ್ನಾಯುಗಳ ಸಹಾಯದಿಂದ ಸೊಂಡಿಲನ್ನು ಕೋಶದೊಳಕ್ಕೆ ಎಳೆದುಕೊಳ್ಳುತ್ತದೆ, ಮತ್ತು ಹೊರಕ್ಕೆ ತಳ್ಳುತ್ತದೆ. ದೇಹ ದುಂಡಾಗಿ ಅಥವಾ ಚಪ್ಪಟೆಯಾಗಿರುತ್ತದೆ. ವಲಯಗಳಾಗಿ ವಿಭಾಗವಾಗಿಲ್ಲ. ಹಿಗ್ಗಲೂಬಹುದು, ಕುಗ್ಗಲೂಬಹುದು. ಹೊರಭಾಗದಲ್ಲಿ ಒಂದು ತೆಳುವಾದ ರಕ್ಷಣಾ ಪೊರೆ(ಕ್ಯೂಟಿಕಲ್) ಇದೆ. ಇದು ಹೊರಚರ್ಮದಿಂದ ರೂಪುಗೊಂಡಿದೆ. ಇದರ ಕೆಳಗೆ ಒಳಚರ್ಮವೂ ಒಳಭಾಗದ ಮಾಂಸ ಪದರಗಳೂ ಇವೆ. ಕತ್ತಿನಲ್ಲಿ ಒಳಚರ್ಮದಿಂದ ರೂಪುಗೊಂಡ ಲಾಡಿಯಂತಿರುವ ಎರಡು ಲೆಮ್‍ನಿಸ್ಕೈ (lemnisci) ಎಂಬುವು ಇದೆ, ಇವು ದೇಹದ ದೇಹಾಂತರಾವಕಾಶದವರೆಗೂ ಪಸರಿಸಿರುತ್ತದೆ. ಸೊಂಡಿಲಿನಿಂದ ಎರಡು ಸ್ನಾಯುಗಳು ದೇಹದ ಕಡೆಯವರೆಗೂ ಚಾಚಿದೆ. ಈ ಜೀವಿಗಳಲ್ಲಿ ಜೀರ್ಣಾಂಗಗಳಿಲ್ಲ. ಡಿಂಭ ಮತ್ತು ಪ್ರೌಢಾವಸ್ಥೆಯಲ್ಲಿ ಇವು ಆಹಾರವನ್ನು ಪೋಷಕ ಜೀವಿಯ ಕರುಳಿನಿಂದ ನೇರವಾಗಿ ಹೀರುತ್ತವೆ. ಇವುಗಳಲ್ಲಿ ರಕ್ತ ಪರಿಚಲನೆಯ ಅಂಗಗಳಾಗಲೀ, ಶ್ವಾಸಾಂಗಗಳಾಗಲೀ ಇರುವುದಿಲ್ಲ. ಶುದ್ಧಿಕರಣಾಂಗಗಳು ಕೇವಲ ಎರಡು ಕವಲೊಡೆದ ನೆಫ್ರಿಡಿಯಾಗಳ ರೂಪದಲ್ಲಿದೆ. ಸೊಂಡಿಲಿನಲ್ಲಿರುವ ನರಮುಡಿಯಿಂದ ಎರಡು ನರಗಳು ದೇಹದ ಎರಡು ಪಕ್ಕದಲ್ಲಿಯೂ ಸಾಗುತ್ತವೆ.

 ಗಂಡು ಹೆಣ್ಣಿಗಿಂತ ದೊಡ್ಡದು. ಗಂಡಿನಲ್ಲಿ ಗುಂಡಾದ ಎರಡು ವೃಷಣಗಳಿವೆ. ಇವು ಸ್ನಾಯುಗಳ ನಡುವೆ ಬೆಳೆದಿರುತ್ತವೆ. ಹಿಂಭಾಗಕ್ಕೆ ಒಂದು ನಾಳ ಹೊರಟಿದೆ. ಕೊನೆಯಲ್ಲಿ ಒಂದು ಚೀಲವಿದೆ. ಗಂಡಿನಲ್ಲಿ ಆರರಿಂದ ಎಂಟರವರೆಗೆ ಅಂಟು ದ್ರವವನ್ನು ಸ್ರವಿಸುವ ಸಿಮೆಂಟ್ ಗ್ರಂಥಿಗಳಿವೆ. ಹೆಣ್ಣಿನಲ್ಲಿ, ಮರಿಯಾಗಿದ್ದಾಗ ಮಾತ್ರ, ಅಂಡಾಶಯವು ಚಂಡಿನಂತಿರುತ್ತದೆ. ಇದು ಸ್ನಾಯುಗಳ ಮೇಲೆ ಬೆಳೆದಿರುತ್ತದೆ. ಮುಂದೆ ದೇಹಾಂತರಾವಕಾಶವೆಲ್ಲ ಅಂಡಗಳಿಂದ (ova) ತುಂಬುತ್ತದೆ. ಗರ್ಭಾಂಕುರವಾಗುವುದು ಅಲ್ಲಿಯೆ. ಗರ್ಭಕಟ್ಟಿದ ಅನಂತರ ಮೊಟ್ಟೆ ಗೋಳಾಕಾರವನ್ನೋ, ಕದಿರಾನಾಕರವನ್ನೋ ತಾಳುತ್ತದೆ. ಈ ಮೊಟ್ಟೆಗಳಿಗೆ ಮೂರ್ನಾಲ್ಕು ಕವಚಗಳಿರುತ್ತವೆ. ದೇಹದಿಂದ ಹೊರಗೆ ಬರುವಷ್ಟರಲ್ಲಿ ಭ್ರೂಣ ಸಾಕಷ್ಟು ಬೆಳೆದಿರುತ್ತದೆ. ಅನಂತರ ಭ್ರೂಣ ಸಹಿತವಾದ ಮೊಟ್ಟೆಗಳು ಪೋಷಕ ಪ್ರಾಣಿಯ ಮಲದೊಂದಿಗೆ ಹೊರಕ್ಕೆ ಬರುತ್ತವೆ. ವಾತಾವರಣದ ವೈಪರೀತ್ಯವನ್ನು ತಡೆಯುವುದಕ್ಕಾಗಿಯೇ ಇವಕ್ಕೆ ರಕ್ಷಣಾಕವಚವಿರುವುದು. ಮಧ್ಯವರ್ತಿ ಸಂಧಿಪದಿಗಳು ಇಂಥ ಮೊಟ್ಟೆಯನ್ನು ನುಂಗಿದರೆ ಮಾತ್ರ ಇದರ ಜೀವಚಕ್ರ ಮುಂದುವರಿಯುತ್ತದೆ. ಮುಂದೆ ಮೊಟ್ಟೆಯನ್ನು ನುಂಗಿದ ಸಂಧಿಪದಿಯನ್ನು ಯಾವುದಾದರೂ ಕಶೇರುಕವು ತಿಂದರೆ, ಈ ಉಪಜೀವಿ ಕಶೇರುಕದ ಕರುಳನ್ನು ಸೇರಿ ದೊಡ್ಡದಾಗುತ್ತದೆ. ಅಲ್ಲಿ, ತನ್ನ ಸೊಂಡಿಲಿನಿಂದ ಪೋಷಕ ಜೀವಿಯ ಕರುಳಿಗೆ ಅಂಟಿಕೊಳ್ಳುತ್ತದೆ. 

 ಹಿಂದೆ ಈ ಅಂಕುಶ ಕಪಾಲಿಯನ್ನು ದುಂಡು ಹುಳುಗಳ (ನೆಮೆಟೋಡ್ಸ್) ವಂಶದ ಜೊತೆಗೆ ಸೇರಿಸಿದ್ದರು. ರಚನೆ ಜೀವನ ಚರಿತ್ರೆಗಳ ಪೂರ್ಣ ಪರಿಚಯವಾದ ಮೇಲೆ ವಾನ್ ಕ್ಲೀವನ್ (1948) ಇದನ್ನು ಪ್ರತ್ಯೇಕ ವಂಶವೆಂದು ಪರಿಗಣಿಸಿದನು.

 

(ಸಿ.ಎಂ.ಎಸ್.)